ಅಸೋಸಿಯೇಟೆಡ್ ಪ್ರೆಸ್ ಆಫ್ ಇಂಡಿಯ
ಭಾರತೀಯರೇ ಸ್ಥಾಪಿಸಿದ ಪ್ರಪ್ರಥಮ ಸುದ್ದಿ ಸಂಸ್ಥೆ (ಎಪಿಐ). ಭಾರತೀಯರು ತಾವೇ ತಮ್ಮ ಸ್ವಂತ ಸುದ್ದಿಸಂಸ್ಥೆಯನ್ನು ಸ್ಥಾಪಿಸುವ ಆಲೋಚನೆ ಮಾಡಿದುದರ ಫಲವಾಗಿ, ಕಲ್ಕತ್ತ ಮತ್ತು ಸಿಮ್ಲಾ ನಗರಗಳಲ್ಲಿ ವಿಶೇಷ ಸುದ್ದಿಗಾರನಾಗಿ ಕೆಲಸ ಮಾಡುತ್ತಿದ್ದ ನುರಿತ ಪತ್ರಿಕೋದ್ಯಮಿ ಕೆ. ಸಿ. ರಾಯ್, ಈ ಸುದ್ದಿ ಸಂಸ್ಥೆಯನ್ನು ಸ್ಥಾಪಿಸಿ ಕೀರ್ತಿಗಳಿಸಿದ. ರಾಯ್ ವಿದೇಶೀ ಸುದ್ದಿಸಂಸ್ಥೆಗಳು ಕೆಲಸಮಾಡುವ ರೀತಿಯನ್ನು ಅಭ್ಯಾಸಮಾಡಿ, ತಂತೀ ಸುದ್ದಿಗಳನ್ನು ಸುಲಭಬೆಲೆಗೆ ಹೇಗೆ ಒದಗಿಸಬೇಕೆಂಬ ಬಗ್ಗೆ ಆಲೋಚನೆಮಾಡಿದ. 1910ನೆಯ ಇಸವಿಯಲ್ಲಿ ಕಲ್ಕತ್ತ ನಗರದಲ್ಲಿ ಕೇಂದ್ರ ಕಚೇರಿ ತೆರೆಯಲಾಯಿತು. ಮದರಾಸ್, ಬೊಂಬಾಯಿ ನಗರಗಳಲ್ಲಿ ಉಪ ಶಾಖೆಗಳೇರ್ಪಟ್ಟುವು. ರಾಯ್‍ನ ಪ್ರಯತ್ನ ಮತ್ತು ಪ್ರಭಾವದ ಕಾರಣವಾಗಿ ಭಾರತದ (ಅಂಚೆ) ತಂತಿಯ ಕಾನೂನು ತಿದ್ದುಪಡಿಯಾಗಿ, ಪತ್ರಿಕೆಗಳಿಗೆ ಸುದ್ದಿಗಳನ್ನು ಕಳುಹಿಸುವ ತಂತಿಗಳಿಗೆ ಕೊಡುವ ಬೆಲೆಯ ದರವನ್ನು ಇಳಿಸಲಾಯಿತು. ಇದರಿಂದ ದೇಶದಾದ್ಯಂತ ಸುಲಭ ಖರ್ಚಿನಲ್ಲಿ, ಬಹುಬೇಗ ಸುದ್ದಿ ಸಮಾಚಾರಗಳನ್ನು ತಲುಪಿಸುವ ಏರ್ಪಾಡಾಯಿತು. ವ್ಯವಸ್ಥಾಪಕ ಸಂಚಾಲಕನಾಗಿ ರಾಯ್ ಈ ಸುದ್ದಿಸಂಸ್ಥೆಯನ್ನು ಶ್ರದ್ಧೆಯ ದುಡಿಮೆಯಿಂದ ಜನಪ್ರಿಯವನ್ನಾಗಿ ಮಾಡಿದ.					    
(ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ